ಪೈನೇಸೀ -
ಕೋನಿಫರೇಲೀಸ್ ಗಣಕ್ಕೆ ಸೇರಿದ ಅನಾವೃತ ಬೀಜ ಸಸ್ಯ ಕುಟುಂಬ.  ಈ ಗಣದ ಅರ್ಧಕ್ಕಿಂತ ಹೆಚ್ಚು ಸಂಖ್ಯೆಯ ಸಸ್ಯಗಳು ಈ ಕುಟುಂಬಕ್ಕೆ ಸೇರಿವೆಯಾಗಿ ಇದು ಈ ಗಣದ ಬಲು ಮುಖ್ಯ ಕುಟುಂಬವೆನಿಸಿದೆ.  ಇವು ಸಾಮಾನ್ಯವಾಗಿ ಸಮಶೀತೋóಷ್ಣ ವಲಯಕ್ಕೆ ಸೀಮಿತ ಹಾಗೂ ಸಮುದ್ರ ಮಟ್ಟಕ್ಕಿಂತ ಹೆಚ್ಚು ಎತ್ತರದ ಪರ್ವತ ಪ್ರದೇಶಗಳಲ್ಲಿ ಬೆಳೆಯುವುವು.  ಭಾರತದಲ್ಲಿ ಹಿಮಾಲಯ ಪರ್ವತದ ಕಣಿವೆಗಳಲ್ಲಿ ಈ ಗುಂಪಿನ ಪ್ರಭೇದಗಳನ್ನು ಕಾಣಬಹುದು.  
ಏಬೀಸ್, ಕೆಟಲೇರಿಯ-ಸೂಡೊ ಸೂಗ, ಪೈಸಿಯ, ಲ್ಯಾರಿಕ್ಸ್, ಸಿಡ್ರಸ್ ಮತ್ತು ಪೈನಸ್, ಇವು ಕುಟುಂಬದ ಪ್ರಮುಖ ಜಾತಿಗಳು.

ಕುಟುಂಬದಲ್ಲಿ ಎಲ್ಲ ಪ್ರಭೇದಗಳೂ ಸಾಧಾರಣವಾಗಿ ಹೆಚ್ಚು ಎತ್ತರಕ್ಕೆ ಬೆಳೆಯುವಂಥ ಗೋಪುರಾಕೃತಿಯ ಸುಂದರ ವೃಕ್ಷಗಳು, ಏಬೀಸ್ ಪೈನಸ್ ಮತ್ತು ಸಿಡ್ರಸ್ ಮರಗಳು 30-60 ಮೀ. ಎತ್ತರಕ್ಕೆ ಬೆಳೆಯಬಲ್ಲವು.  ಸಾಕಷ್ಟು ಎತ್ತರದ ವರೆಗೆ ಕವಲೊಡೆಯದ ಮುಖ್ಯ ಕಾಂಡವಿದ್ದು, ಕೊಂಬೆಗಳು ವೃತ್ತಗಳಲ್ಲಿ ಇಲ್ಲವೇ ನಿರ್ದಿಷ್ಟ ಹಂತಗಳಲ್ಲಿ ಜೋಡಣೆಗೊಂಡಂತೆ ಮೂಡುವುವು.  

ಎಲೆಗಳು ಸಾಮಾನ್ಯವಾಗಿ ನೀಲವಾದ ಸೂಜಿಗಳಂತಿವೆ.  ಏಬೀಸ್ ಮತ್ತು ಪೈಸಿಯಗಳಲ್ಲಿ ಎಲೆಗಳು ಸ್ವಲ್ಪ ಚಪ್ಪಟೆಯಾಗಿದ್ದು ಎರಡು ಸಾಲುಗಳಲ್ಲಿ ಜೋಡಣೆಯಾಗಿದ್ದರೆ ಲ್ಯಾರಿಕ್ಸ್, ಸಿಡ್ರಸ್ ಮತ್ತು ಪೈನಸ್‍ಗಳಲ್ಲಿ ನೀಳವಾದ ಸೂಜಿಯಂಥ ಎಲೆಗಳಿದ್ದು ಕುಬ್ಜ ಕಾಂಡಗಳಲ್ಲಿ ನಿಖರವಾದ ಗುಂಪುಗಳಲ್ಲಿ ಜೋಡಣೆಗೊಂಡಿರುವುವು.  ಪೈನಸ್‍ನಲ್ಲಿ 2 ರಿಂದ 5 ರ ಗುಂಪಿನಲ್ಲಿದ್ದರೆ, ಸಿಡ್ರಸ್‍ನಲ್ಲಿ 30 ರಿಂದ 40 ರ ಗುಂಪುಗಳಲ್ಲಿರುತ್ತವೆ.  ಲ್ಯಾರಿಕ್ಸ್‍ನಲ್ಲಿ ವರ್ಷಕ್ಕೊಮ್ಮೆ ಎಲೆಗಳು ಉದುರುತ್ತವೆ.  ಇನ್ನು ಮಿಕ್ಕ ಜಾತಿಗಳು ನಿತ್ಯ ಹಸುರು ಮರಗಳು. ಹೆಣ್ಣು ಮತ್ತು ಗಂಡು ಶಂಕುಗಳು ಒಂದೇ ಕೊಂಬೆಯಲ್ಲಿ ಇಲ್ಲವೇ ಒಂದೇ ಮರದ ಬೇರೆ ಬೇರೆ ಕೊಂಬೆಗಳಲ್ಲಿ ಬೆಳೆಯುತ್ತವೆ.  ಗಂಡು ಶಂಕುಗಳಲ್ಲಿ ಕೇಸರಗಳು ಅಕ್ಷದ ಮೇಲೆ ಒತ್ತಾಗಿ ಜೋಡಣೆಯಾಗಿವೆ.  ಕೇಸರದ ತುದಿ ಮುಂದಕ್ಕೆ ಬಾಗಿದ್ದು ಪ್ರತಿ ಕೇಸರದ ಒಳಮುಖದಲ್ಲಿ ಎರಡು ಪರಾಗಕೋಶಗಳುಂಟು.  ಪರಾಗಗಳಿಗೆ ಸಾಮಾನ್ಯವಾಗಿ ರೆಕ್ಕೆಗಳಿವೆ ; ಇದರಿಂದ ಗಾಳಿಯಲ್ಲಿ ತೇಲಲು ಅನುಕೂಲ.  ಹೆಣ್ಣು ಶಂಕುಗಳಲ್ಲಿ ದಪ್ಪ ಅಂಡಕ ಪೆಟ್ಟಿಗಳು ಅಕ್ಷದ ಮೇಲೆ ಒತ್ತಾಗಿ ಜೋಡಣೆಯಾಗಿವೆ.  ಪ್ರತಿ ಅಂಡಕಪಟ್ಟಿಯ ಒಮುಖದಲ್ಲಿ ಎರಡು ಅಂಡಕಗಳಿವೆ.  ಅಂಡಕಪಟ್ಟಿಗಳ ಒಣಪೊರೆಯಂಥ ಕಾರ್ಪೆಲರಿ ಪಟ್ಟಿಗಳ ಕಂಕುಳಲ್ಲಿ ಸ್ಥಿತವಾಗಿವೆ.  ಪೈನಸ್‍ನಲ್ಲಿ ಕಾರ್ಪೆಲರಿ ಪಟ್ಟಿ ಚಿಕ್ಕ ಗಾತ್ರದ್ದು.  ಆದರೆ, ಏಬೀಸ್, ಸೊಡೋಸೊಗ ಮುಂತಾದ ಪ್ರಭೇದಗಳಲ್ಲಿ ಇದು ಅಂಡಕಪಟ್ಟಿಗಿಂತ ದೊಡ್ಡದಾಗಿ ಬೆಳೆದಿರುವುದುಂಟು.  ಬಲಿತ ಶಂಕುಗಳಲ್ಲಿ ಅಂಡಕಪಟ್ಟಿ ಗಟ್ಟಿಯಾಗಿದ್ದು ಕೆಲವು ವೇಳೆ 50 ಸೆಂ.ಮೀ. ಬೆಳೆದಿದೆ.  ಬಲಿತ ಬೀಜಗಳಲ್ಲಿ ಅಂಡಕಪಟ್ಟಿಯಿಂದ ಬೆಳೆದ ರೆಕ್ಕೆ ಇದೆ.

ಈ ಕುಟುಂಬದ ಪ್ರಭೇದಗಳಿಂದ ಬೆಲೆಬಾಳುವ ಚೌಬೀನೆ ದೊರಕುತ್ತದೆ.  ಸಿಡ್ರಸ್ ಡಿಯೋಡಾರ ಮರ ತೇಗದ ಮರದಷ್ಟೇ ಉತ್ಕøಷ್ಟ.   ಇದರ ಮರವನ್ನು ರೈಲ್ವೆ ಸ್ಲೀಪರುಗಳು, ಮನೆ ಕಟ್ಟುವ ಸಾಮಾನುಗಳು ಮತ್ತು ಎರಡನೆ ದರ್ಜೆಯ ಸೀಸದ ಕಡ್ಡಿಗಳ ತಯಾರಿಕೆಗೆ ಉಪಯೋಗಿಸುತ್ತಾರೆ.  ಲ್ಯಾರಿಕ್ಸ್ ಮತ್ತು ಈ ಕುಟುಂಬದ ಇತರ ಪ್ರಭೇದಗಳ ಮರಗಳನ್ನು ಸಹ ಕೆಳದರ್ಜೆಯ ಸೀಸದ ಕಡ್ಡಿಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.  ಪೈನಸ್ ಮರದಿಂದ ಟರ್ಪೆಂಟೈನ್ ಮತ್ತು ಪೈನೆ ಎಣ್ಣೆ ದೊರೆಯುತ್ತದೆ ಹಾಗೂ ಮರ ಅತ್ಯಂತ ಉಪಯುಕ್ತ.
(ಟಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ